Courtesy :
. ಇದೇ ಏಪ್ರಿಲ್ 9 ರಂದು ನಡೆಯಲಿರುವ ಉಪಚುನಾವಣೆಗಳಲ್ಲಿ ಸಮಸ್ತ ಮಾದಿಗರು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಮತ ಚಲಾಯಿಸ ಬೇಕು. ಸುಪ್ರೀಂ ಕೋರ್ಟಿನ ತೀರ್ಪನ್ನು ಅನುಷ್ಠಾನಕ್ಕೆ ತರದೆ ನೆಪ ಒಡ್ಡುತ್ತಿರುವ ರಾಜ್ಯ ಸರ್ಕಾರವನ್ನು ರಾಷ್ಟ್ರಪತಿಗಳು ವಜಾ ಮಾಡಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರ ಬೇಕು ಎಂದು ಮಾದಿಗ ಸಮುದಾಯಗಳ ಒಕ್ಕೂಟ ಕರೆ ನೀಡಿದೆ.
35 ವರ್ಷಗಳ ಹೋರಾಟದ ಫಲವಾಗಿ, ಸುಪ್ರೀಂ ಕೋರ್ಟಿನ ತೀರ್ಪಿನ ಅನ್ವಯ ಮಾದಿಗರಿಗೆ ಮೀಸಲಾತಿ ನೀಡಬೇಕಿತ್ತು. ಆದರೆ ಸುಪ್ರೀಂ ಕೋರ್ಟಿನ ತೀರ್ಪನ್ನು ಧಿಕ್ಕರಿಸಿ, ಒಳ ಮೀಸಲಾತಿ ಇಲ್ಲದೆಯೇ, ಸುಮಾರು ಐವತ್ತಾರು ಸಾವಿರ ಹುದ್ದೆಗಳನ್ನು ತುಂಬಲು ರಾಜ್ಯ ಸರ್ಕಾರ ಹೊರಟಿದೆ. ಇದನ್ನು ವಿರೋಧಿಸಿ ಒಕ್ಕೂಟ ಹಲವಾರು ಚಳುವಳಿಗಳ ಹಮ್ಮಿಕೊಂಡಿತ್ತು. ನಿರಂತರ ಮನವಿ, ಪ್ರತಿಭಟನೆಗಳನ್ನು ಮಾಡಿತ್ತು. ಆದರೂ ರಾಜ್ಯ ಸರ್ಕಾರ, ಮಾದಿಗ ಸಮುದಾಯಗಳ ಹಿತವನ್ನು ಕಡೆಗಣಿಸಿದೆ ಎಂದು ಒಕ್ಕೂಟದ ಪ್ರಮುಖರಾದ ಎನ್. ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟಿನ ಆದೇಶದ ಉಲ್ಲಂಘನೆ, ರಾಜ್ಯದಲ್ಲಿ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆ, ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳು ಹೆಚ್ಚಾಗಿವೆ. ಇದರ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ರಾಷ್ಟ್ರಪತಿಗಳೇ ಮಧ್ಯ ಪ್ರವೇಶಿಸಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರ ಬೇಕು ಎಂದು ಇದೇ ಸಂದರ್ಭದಲ್ಲಿ ಒಕ್ಕೂಟದ ಇತರೆ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಇದಕ್ಕೂ ಮೊದಲು ರಾಜ್ಯ ಸರ್ಕಾರ ಮಾರ್ಚ್ 27ರಂದು, ವಿಶೇಷ ಸಚಿವ ಸಂಪುಟ ಸಭೆ ಕರೆದು ವಿವಾದವನ್ನು ಇತ್ಯರ್ಥ ಪಡಿಸುವುದಾಗಿ ತಿಳಿಸಿ ತ್ತು. ಆದರೆ ಈಗ ಉಪಚುನಾವಣೆ ಬಂದಿರುವುದರಿಂದ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ನೆಪದಲ್ಲಿ ಸರ್ಕಾರ ಮಾದಿಗರಿಗೆ ದ್ರೋಹ ಮಾಡಿದೆ. ಇದನ್ನು ಖಂಡಿಸುವುದರೊಂದಿಗೆ, ಕಾಂಗ್ರೆಸ್ ಗೆ ಬುದ್ಧಿ ಕಲಿಸಬೇಕಾದರೆ ಅವರ ವಿರೋಧಿಗಳಿಗೆ ಮತ ನೀಡಬೇಕೆಂದು ಒಕ್ಕೂಟದ ಇನ್ನಿತರೆ ನಾಯಕರು ಮಾದಿಗ ಮತ್ತು ಮಾದಿಗ ಸಂಬಂಧಿತ ಜನಾಂಗಕ್ಕೆ ಕರೆ ನೀಡಿದ್ದಾರೆ.
30-03-2026