Courtesy :
ಬೆಂಗಳೂರು, 12 ಮಾರ್ಚ್ 2026: 19 ವರ್ಷದ ಆನಂದು ಎಂಬ ಯುವಕ ಹಲವು ವರ್ಷಗಳಿಂದ ಗಂಭೀರ ಅಪ್ಲಾಸ್ಟಿಕ್ ರಕ್ತಹೀನತೆಯಿಂದ ಬಳಲುತ್ತಿದ್ದರು. ಇವರಿಗೆ ಬೆಂಗಳೂರಿನ ಸ್ವಾತಿ ಎಂಬ 32 ವರ್ಷದ *ಮಹಿಳೆ ಸ್ಟೆಮ್ ಸೆಲ್ (ಕಾಂಡಕೋಶ) ದಾನ ಮಾಡಿ ಆ ಯುವಕನ ಪಾಲಿಗೆ ಜೀವರಕ್ಷಕಿಯಾಗಿದ್ದಾರೆ*. ಇದೇ ಮೊದಲ ಬಾರಿಗೆ ಇವರಿಬ್ಬರೂ ಮುಖಾಮುಖಿಯಾಗಿ ಭೇಟಿ ಮಾಡಿ ಪರಸ್ಪರ ಸಂತಸ ಹಂಚಿಕೊಂಡಿದ್ದಾರೆ.
ಆನಂದು ಅವರು 15 ವರ್ಷದವರಿದ್ದಾಗ ಗಂಭೀರ ಸ್ವರೂಪದ ಅಪ್ಲಾಸ್ಟಿಕ್ ರಕ್ತಹೀನತೆ ಇರುವುದಾಗಿ ತಪಾಸಣೆಯಲ್ಲಿ ದೃಢಪಟ್ಟಿತು. ಕೋವಿಡ್-19 ಲಸಿಕೆ ಪಡೆದ ಬಳಿಕ ಅವರಿಗೆ ನಿರಂತರವಾಗಿ ಜ್ವರ ಕಾಣಿಸತೊಡಗಿತು. ಅಪ್ಲಾಸ್ಟಿಕ್ ರಕ್ತಹೀನತೆ ಸಾವಿಗೆ ಕಾರಣವಾಗಬಹುದಾದ ಗಂಭೀರ ಸಮಸ್ಯೆಯಾಗಿದ್ದು, ಇದರಲ್ಲಿ ಬೋನ್ ಮ್ಯಾರೋ ಹೊಸ ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗುತ್ತದೆ.
ಈ ಯುವಕನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಾದ ಕೋಝಿಕೋಡ್‌ನ ಬಿಎಂಟಿ ಮತ್ತು ಎಂವಿಆರ್ ಕ್ಯಾನ್ಸರ್ ಸೆಂಟರ್ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ನ ಪೀಡಿಯಾಟ್ರಿಕ್ ಹೆಮಾಟೋ-ಆಂಕಾಲಜಿ ಕನ್ಸಲ್ಟೆಂಟ್ ಡಾ. ವಿ.ಪಿ. ಕೃಷ್ಣನ್, ಕಾಂಡಕೋಶ ಕಸಿ ಮಾಡಿಸಿಕೊಳ್ಳುವುದು ಒಂದೇ ಚಿಕಿತ್ಸಾ ಆಯ್ಕೆಯಾಗಿದೆ ಎಂದು ಸಲಹೆ ನೀಡಿದರು. ಆದ್ದರಿಂದ ಕಾಂಡಕೋಶ ದಾನಿಯನ್ನು ಹುಡುಕುವ ಪ್ರಕ್ರಿಯೆ ಆರಂಭಿಸಲಾಯಿತು. ಇಂತಹ ಕಠಿಣ ಸಂದರ್ಭದಲ್ಲೇ ಆನಂದು ಅವರ ಕುಟುಂಬವು ಭಾವನಾತ್ಮಕ ಹಾಗೂ ಆರ್ಥಿಕ ಒತ್ತಡವನ್ನು ಎದುರಿಸಿತು. ರಕ್ತ ಕಾಂಡಕೋಶ ಕಸಿ ಅಗತ್ಯವಿರುವ ರೋಗಿಗಳಿಗೆ ಭಾಗಶಃ ಆರ್ಥಿಕ ನೆರವು ನೀಡುವ DKMS ಪೇಷಂಟ್ ಫಂಡಿಂಗ್ ಪ್ರೋಗ್ರಾಂ ಇಂಡಿಯಾ ಮೂಲಕವೂ ಆನಂದು ಆರ್ಥಿಕ ಸಹಾಯ ಪಡೆದರು.
ಇಂದು ಆನಂದು ಆರೋಗ್ಯಕರ ಜೀವನ ನಡೆಸುತ್ತಿದ್ದು, 12ನೇ ತರಗತಿ ಪರೀಕ್ಷೆಗೂ ಹಾಜರಾಗುತ್ತಿದ್ದಾರೆ. ಅಲ್ಲದೆ ತಮ್ಮ ನೆಚ್ಚಿನ ವಿಡಿಯೋಗ್ರಫಿ ಹಾಗೂ ಫೋಟೋಗ್ರಫಿಯನ್ನೂ ಮುಂದುವರಿಸುತ್ತಿದ್ದಾರೆ.
ಡಾ. ಕೃಷ್ಣನ್ ಅವರು ಮಾತನಾಡಿ,
“2022ರಲ್ಲಿ ಆನಂದು ಅವರನ್ನು ಪರೀಕ್ಷಿಸಿದಾಗ ಅವರಿಗೆ ಗಂಭೀರ ಅಪ್ಲಾಸ್ಟಿಕ್ ರಕ್ತಹೀನತೆ ಇರುವುದು ಪತ್ತೆಯಾಯಿತು. ಕಾಂಡಕೋಶ ಕಸಿಗೆ ಬೆಂಬಲ ದೊರಕಿದ ನಂತರ, ಸಂಬಂಧಿಕರಲ್ಲದ ವ್ಯಕ್ತಿಯಿಂದ ಹೊಂದಾಣಿಕೆಯಾಗುವ ಹೆಮಾಟೋಪೊಯೆಟಿಕ್ ಕೋಶವನ್ನು 2023ರಲ್ಲಿ ಕಸಿ ಮಾಡಲಾಯಿತು. ಕಸಿ ಸಮಯದಲ್ಲಿ ಫೆಬ್ರೈಲ್ ನ್ಯೂಟ್ರೋಪೆನಿಯಾ ಮತ್ತು ಮ್ಯುಕೋಸಿಟಿಸ್ ಮುಂತಾದ ಸಂಕೀರ್ಣತೆಗಳನ್ನು ಅವರು ಎದುರಿಸಿದರು. ನಂತರ ಅವರ ಆರೋಗ್ಯದ ಪ್ರಗತಿ ಉತ್ತಮವಾಗಿತ್ತು. DKMS ಸಂಸ್ಥೆ ಕೇವಲ ಸಂಬಂಧಿಕರಲ್ಲದ ದಾನಿಯನ್ನು ಹುಡುಕುವುದರಲ್ಲಿ ಮಾತ್ರವಲ್ಲ, ಕಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿಯೂ ಮಹತ್ವದ ಪಾತ್ರವಹಿಸಿದೆ. ಇದರಿಂದ ಅವರ ಕುಟುಂಬದ ಆರ್ಥಿಕ ಹೊರೆ ಕೂಡ ಕಡಿಮೆಯಾಯಿತು. ಈಗ ಆನಂದು ಆರೋಗ್ಯವಂತರಾಗಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದಾರೆ,” ಎಂದು ಹೇಳಿದರು.
ಐಟಿ ಕನ್ಸಲ್ಟೆಂಟ್ ಆಗಿರುವ ಸ್ವಾತಿ ಅವರು 2016ರಲ್ಲಿ DKMS ಸಂಸ್ಥೆ ನಡೆಸಿದ ತಮ್ಮ ಕಾರ್ಯಸ್ಥಳದಲ್ಲಿನ ದಾನಿಗಳ ನೋಂದಣಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. 2022ರಲ್ಲಿ DKMS ಸಂಸ್ಥೆಯಿಂದ ಕರೆ ಬಂದಿದ್ದು, ತಮ್ಮ ಕಾಂಡಕೋಶವನ್ನು ದಾನ ಮಾಡುವಂತೆ ಮನವಿ ಮಾಡಲಾಯಿತು. ಯಾವುದೇ ಯೋಚನೆ ಮಾಡದೇ ಅವರು ಸ್ಟೆಮ್ ಸೆಲ್ ದಾನ ಮಾಡಲು ಒಪ್ಪಿಗೆ ನೀಡಿದರು. ಈ ನಿರ್ಧಾರಕ್ಕೆ ಅವರ ಪತಿ ಹಾಗೂ ಕುಟುಂಬ ಸದಸ್ಯರು ಸಹ ಸಂಪೂರ್ಣ ಬೆಂಬಲ ನೀಡಿದರು. ಈ ಮೂಲಕ ಸ್ವಾತಿ ಒಬ್ಬ ವ್ಯಕ್ತಿಯ ಜೀವ ಉಳಿಸಿ ಜೀವರಕ್ಷಕಿಯಾಗಿದ್ದಾರೆ. ಇತ್ತೀಚೆಗೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸ್ವಾತಿ ಅವರು,“ಪೋಷಕರ ನೋವು ಏನೆಂಬುದು ನನಗೆ ತಿಳಿದಿದೆ. ಮಗುವಿಗೆ ಆರೋಗ್ಯ ಸಮಸ್ಯೆ ಎದುರಾದಾಗ ತಾಯಿಗೆ ಎಂತಹ ನೋವು ಆಗುತ್ತದೆ ಎಂಬುದು ನನಗೆ ಅರ್ಥವಾಗಿದೆ. ನಾನು ಮಾಡಿದ ಈ ದಾನ ನನ್ನ ಗಂಡು ಮಗುವನ್ನು ಸ್ವಾಗತಿಸಿದಂತೆಯೇ ಮತ್ತೊಬ್ಬರ ಜೀವನಕ್ಕೂ ಹೊಸ ಅವಕಾಶ ನೀಡಿದಂತಾಗಿದೆ,” ಎಂದು ಹೇಳಿದರು.
DKMS ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ಪ್ಯಾಟ್ರಿಕ್ ಪೌಲ್ ಮಾತನಾಡಿ,“ಆನಂದು ಮತ್ತು ಸ್ವಾತಿಯ ಕಥೆ ಇನ್ನಷ್ಟು ಜನರು ಸಂಭಾವ್ಯ ಸ್ಟೆಮ್ ಸೆಲ್ ದಾನಿಗಳಾಗಿ ನೋಂದಾಯಿಸಬೇಕಾದ ಅಗತ್ಯವನ್ನು ನೆನಪಿಸುತ್ತದೆ. ಸ್ವಾತಿಯಂತಹ ದಾನಿಗಳ ಉದಾರತೆಯೇ ಜೀವರಕ್ಷಕ ಕಸಿಗಳನ್ನು ಸಾಧ್ಯವಾಗಿಸುತ್ತದೆ. ಭಾರತದ ಅರ್ಹ ಜನಸಂಖ್ಯೆಯ ಕೇವಲ 0.09% ಜನರು ಮಾತ್ರ ದಾನಿಗಳಾಗಿ ನೋಂದಾಯಿಸಿದ್ದು, ಹೊಂದಾಣಿಕೆ ಹುಡುಕುವ ಸಾಧ್ಯತೆ ಕಡಿಮೆಯಾಗಿದೆ. ಇಂತಹ ಕಥೆಗಳ ಮೂಲಕ ಇನ್ನಷ್ಟು ಜನರನ್ನು ನೋಂದಣಿಗೆ ಪ್ರೇರೇಪಿಸಿ, ರಕ್ತ ಕ್ಯಾನ್ಸರ್ ಹಾಗೂ ರಕ್ತ ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬದುಕಿನ ಎರಡನೇ ಅವಕಾಶ ನೀಡುವ ಆಶಯವಿದೆ,” ಎಂದು ಹೇಳಿದರು.
“ಕರ್ನಾಟಕದಲ್ಲಿ 49,000ಕ್ಕೂ ಹೆಚ್ಚು ಜನರು DKMS Foundation India ಸಂಸ್ಥೆಯೊಂದಿಗೆ ಸಂಭಾವ್ಯ ಕಾಂಡಕೋಶ ದಾನಿಗಳಾಗಿ ನೋಂದಾಯಿಸಿದ್ದಾರೆ. ಬೆಂಗಳೂರು ನಗರದಲ್ಲೇ ಸುಮಾರು 38,000 ನೋಂದಾಯಿತ ದಾನಿಗಳು ಇದ್ದಾರೆ,” ಎಂದು ಅವರು ತಿಳಿಸಿದರು.
ಬೆಂಗಳೂರು ಸೈಟ್ ಕೇರ್ ಹಾಸ್ಪಿಟಲ್ಸ್ ನ ಹೆಮಾಟೋ-ಆಂಕಾಲಜಿಸ್ಟ್ ಹಾಗೂ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಕನ್ಸಲ್ಟೆಂಟ್ ಡಾ. ಗೋವಿಂದ್ ಎರಿಯಟ್ ಮಾತನಾಡಿ,
“ಗಂಭೀರ ಅಪ್ಲಾಸ್ಟಿಕ್ ರಕ್ತಹೀನತೆ ರೋಗಿಗಳಿಗೆ ಕಾಂಡಕೋಶ ಕಸಿಯೇ ಏಕೈಕ ಚಿಕಿತ್ಸೆ. ಆದರೆ ಹೊಂದಾಣಿಕೆಯಾಗುವ ದಾನಿಯನ್ನು ಹುಡುಕುವುದು ದೊಡ್ಡ ಸವಾಲು. ಆನಂದು ಅವರ ಪಯಣ ಗಂಭೀರ ರಕ್ತದ ಅಸ್ವಸ್ಥತೆಗಳನ್ನು ಎದುರಿಸುತ್ತಿರುವ ರೋಗಿಗಳು ಮತ್ತು ಅವರ ಕುಟುಂಬಗಳ ಧೈರ್ಯವನ್ನು ತೋರಿಸುತ್ತದೆ. ಅವರ ಸಾಧನೆಯನ್ನು ನಾವು ಮೆಚ್ಚುತ್ತೇವೆ. ಇದೇ ವೇಳೆ ಸ್ವಾತಿಯ ದಾನಶೀಲ ನಿರ್ಧಾರ ಕರುಣೆಯ ಪ್ರತಿಬಿಂಬವಾಗಿದ್ದು, ಒಬ್ಬ ಯುವಕನಿಗೆ ಬದುಕಿನ ಮತ್ತೊಂದು ಅವಕಾಶ ನೀಡಿದೆ,” ಎಂದು ಹೇಳಿದರು.