Courtesy :
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಇದೇ ಮಾರ್ಚ್ 16ರಂದು ಅಹೋ ರಾತ್ರಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಭಾರತ ದೇಶದ 17 ರಾಜ್ಯಗಳಲ್ಲಿ ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮಾಜವು ಪರಿಶಿಷ್ಟ ಜಾತಿಯಲ್ಲಿದೆ. ಈ ಹಿಂದೆ ಮಡಿವಾಳ ಸಮಾಜದ ಹಲವು ದಶಕಗಳ ಹೋರಾಟಕ್ಕೆ 2009ರಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಮನವಿಗೆ ಒಪ್ಪಿ ಅಂದಿನ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಮಡಿವಾಳ ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಲು ಪ್ರೊಫೆಸರ್ ಡಾ. ಅನ್ನಪೂರ್ಣ ರವರನ್ನು ನೇಮಕ ಮಾಡಿದರು. ಅವರು ಇಡೀ ರಾಜ್ಯವನ್ನು ಪ್ರವಾಸ ಮಾಡಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಕುಲ ಶಾಸ್ತ್ರ ಅಧ್ಯಯನ ಮಾಡಿ 2011ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆದರೂ ಪ್ರತಿವರ್ಷವೂ ಸತತವಾಗಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘವು ಅಧಿಕಾರದಲ್ಲಿದ್ದಂತಹ ಎಲ್ಲಾ ಸರ್ಕಾರಕ್ಕೆ ಮನವಿ ಮಾಡಿಕೊಂಡು ಬಂದಿರುತ್ತದೆ. 2022 ರಲ್ಲಿ ಅಂದಿನ ಸಮಾಜ ಕಲ್ಯಾಣ ಮಂತ್ರಿಗಳು ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕಡತವನ್ನು ಸಚಿವ ಸಂಪುಟಕ್ಕೆ ತರಲು ಒಪ್ಪಿದ್ದರು. ಆಗ ಮುಖ್ಯಮಂತ್ರಿಗಳು ಅನುಮೋದನೆ ಮಾಡುವುದು ಒಂದು ಮಾತ್ರ ಬಾಕಿ ಇತ್ತು. ಆದರೆ ಮಡಿವಾಳ ಸಮಾಜಕ್ಕೆ ಮತ್ತೆ ಅನ್ಯಾಯವಾಯಿತು. 2025 ರಲ್ಲಿ ಸಮಾಜದ ಜಗದ್ಗುರುಗಳಾದ ಡಾ. ಶ್ರೀ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹಾಗೂ ಶ್ರೀಮುಕ್ಥಾನಂದ ಸ್ವಾಮೀಜಿ ಇವರಗಳ ಸಾನಿಧ್ಯದಲ್ಲಿ ಉತ್ತರ ಕರ್ನಾಟಕದ ಮಡಿವಾಳರ ಸಂಘದ ಸಹಭಾಗಿತ್ವದಲ್ಲಿ 19 ಮಂತ್ರಿಗಳು 137 ಶಾಸಕರ ಗಳಿಂದ ಸರ್ಕಾರಕ್ಕೆ ಶಿಫಾರಸು ಪತ್ರಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದೇವೆ. ಆದ್ದರಿಂದ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ದಿನಾಂಕ 16 3 2026 ಸೋಮವಾರದಂದು ಬೆಳಗ್ಗೆ 8:00 ಯಿಂದ ಫ್ರೀಡಂ ಪಾರ್ಕ್ ನಲ್ಲಿ ಉತ್ತರ ಕರ್ನಾಟಕ ಮಡಿವಾಳ ಸಂಘದ ಸಹಭಾಗಿತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ತಾಲೂಕು ಹೋಬಳಿ ಗ್ರಾಮದಿಂದ ಹೆಚ್ಚಿನ ಮಡಿವಾಳರು ಆಗಮಿಸಿ ಹೋರಾಟ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಂ ಕೆ ಹನುಮಂತಪ್ಪನವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
03-03-2026