First slide

Courtesy :

ಬೆಲೆ ಏರಿಕೆ ನಡುವೆಯೂ ನಂಜುಂಡೇಶ್ವರನ ಹುಂಡಿಯಲ್ಲಿ ಸಿಕ್ಕವು ಭಾರೀ ಮೌಲ್ಯದ ಬೆಳ್ಳಿಯ ಆಭರಣಗಳ ಸುರಿಮಳೆ.

ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಹುಂಡಿಯಲ್ಲಿ ತಿಂಗಳಲ್ಲಿ 2 ಕೋಟಿ 46 ಲಕ್ಷ ರೂ, 50 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ಹಾಗೂ ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ಕಳೆದ ತಿಂಗಳು ಚಿನ್ನ-ಬೆಳ್ಳಿ (Gold-Silver) ಕೊಳ್ಳೋದೆಂದರೆ ಜೀವ ಬಾಯಿಗೆ ಬರುತ್ತಿತ್ತು. ಎರಡೂ ಲೋಹಗಳು 2 ಲಕ್ಷದ ಅಂಚಲ್ಲಿ ನಿಂತು ಜನರನ್ನು (People) ಅಣಕಿಸುತ್ತಿದ್ದವು. ಸಾಮಾನ್ಯರು ಚಿನ್ನ-ಬೆಳ್ಳಿಗೆ ಕೈ ಹಾಕೋದಿರಲಿ, ಅದು ಕಂಡ್ರೂ ಕೈ ಮುಗಿಯೋ ಪರಿಸ್ಥಿತಿ ಬಂದಿತ್ತು. ಆದರೆ ಇವತ್ತು ಓಪನ್‌ ಆದ ನಂಜುಂಡನ ಹುಂಡಿ ಕೊಟ್ಟಿತ್ತು ನೋಡಿ ಶಾಕು! ಬೆಲೆ ಏರಿಕೆ ನಡುವೆಯೂ ನಂಜುಂಡೇಶ್ವರನ ಹುಂಡಿಯಲ್ಲಿ ಸಿಕ್ಕವು ಭಾರೀ ಮೌಲ್ಯದ ಬೆಳ್ಳಿಯ ಆಭರಣಗಳ ಸುರಿಮಳೆ. ಇತಿಹಾಸ ಪ್ರಸಿದ್ಧವಾದ ನಂಜನಗೂಡಿನ ಶ್ರೀಕಂಠೇಶ್ವರ ಈಗ ಕೋಟಿ ಕೋಟಿ ಒಡೆಯನಾಗಿದ್ದಾನೆ. ಕಳೆದ ಒಂದು ತಿಂಗಳ ಅಂತರದಲ್ಲಿ ನಂಜುಡಪ್ಪ ಈ ದಾಖಲೆ ಮಾಡಿದ್ದಾನೆ. ಹೌದು, ನಂಜುಂಡೇಶ್ವರ ದೇವಸ್ಥಾನದ ಹುಂಡಿಯ ಎಣಿಕೆ ಕಾರ್ಯ ನಡೆದಿದ್ದು, ಹುಂಡಿ ಬರೋಬ್ಬರಿ 2 ಕೋಟಿ 46 ಲಕ್ಷದ 28 ಸಾವಿರ ರೂಗಳು ಸಂಗ್ರಹವಾಗಿದೆ. ಕಳೆದ ಒಂದು ತಿಂಗಳ ಹಿಂದೆ ಹುಂಡಿ ಎಣಿಕೆಯ ಕಾರ್ಯ ನಡೆದಿತ್ತು. ಈಗ ಮತ್ತೆ ಒಂದೇ ತಿಂಗಳ ಅಂತರದಲ್ಲಿ ನಂಜುಂಡೇಶ್ವರ ಕೋಟಿಗಳನ್ನು ತನ್ನದಾಗಿಸಿಕೊಂಡಿದ್ದಾನೆ.ನಂಜುಂಡೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯವನ್ನು ನಡೆಸಲಾಗಿದ್ದು, ಈ  ಕಾರ್ಯದಲ್ಲಿ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಹಾಗೂ ಬ್ಯಾಂಕಿನ ಸಿಬ್ಬಂದಿ ಭಾಗವಹಿಸಿದ್ದರು. ಹುಂಡಿಯಲ್ಲಿ ಕೇವಲ ಹಣ ಮಾತ್ರವಲ್ಲದೆ 50 ಗ್ರಾಂ ನಷ್ಟು ಚಿನ್ನ, 2 ಕೆಜಿ ಬೆಳ್ಳಿ ಹಾಗೂ ವಿದೇಶಿ ಕರೆನ್ಸಿಗಳನ್ನು ಭಕ್ತರು ಹಾಕಿದ್ದಾರೆ. ನಂಜುಂಡೇಶ್ವರನಿಗೆ ಕಳೆದ ಅನೇಕ ತಿಂಗಳುಗಳಿಂದ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ ತಿಂಗಳು ನಂಜುಂಡೇಶ್ವರನ ಕ್ಷೇತ್ರದಲ್ಲಿ ಜಾತ್ರೆ ಇದ್ದ ಕಾರಣ ಮತ್ತಷ್ಟು ಜನರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಒಟ್ಟಿನಲ್ಲಿ ಹೆಚ್ಚು ಹಣ ಕೊಡುವ ದೇವಾಲಯದ ಪಟ್ಟಿಗೆ ನಂಜನಗೂಡಿನ ನಂಜುಂಡಪ್ಪನು ಸೇರುತ್ತಿರುವುದು ಮೈಸೂರಿಗರಿಗೆ ಮತ್ತೊಂದು ಗರಿಮೆಯಾಗಿದೆ.

02-02-2026