Courtesy :
ಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ (S Janaki) ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ತಮ್ಮ ಸುಮಧುರ ಕಂಠ, ಅದ್ಭುತ ಗಾಯನ ಶೈಲಿಯಿಂದ ಕೋಟ್ಯಂತರ ಸಂಗೀತಪ್ರಿಯರ ಹೃದಯ ಗೆದ್ದಿರುವ ಹಿನ್ನೆಲೆ ಗಾಯಕಿಯರಲ್ಲಿ ಎಸ್. ಜಾನಕಿ ಅವರ ಹೆಸರು ಅಗ್ರಸ್ಥಾನದಲ್ಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿಯಾಗಿರುವ ಅವರು, ಹಲವು ದಶಕಗಳ ಕಾಲ ಸಂಗೀತ ಲೋಕವನ್ನು ಆಳಿದ ಅಪರೂಪದ ಪ್ರತಿಭೆ. ಚಿಕ್ಕ ಮಗುವಿನ ಧ್ವನಿಯಿಂದ ಹಿಡಿದು ಗಂಭೀರ ಭಾವನೆಗಳನ್ನು ಮೂಡಿಸುವ ಗಾಯನದವರೆಗೆ ತಮ್ಮ ಕಂಠವನ್ನು ವಿಭಿನ್ನ ರೀತಿಯಲ್ಲಿ ಬಳಸಿದ ಕಾರಣ ಅವರಿಗೆ ಭಾರತೀಯ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ದೊರೆಯಿತು.
ಎಸ್. ಜಾನಕಿ ಅವರು 1938ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಒಂದು ಹಳ್ಳಿಯಲ್ಲಿ ಜನಿಸಿದರು. ಬಾಲ್ಯದಿಂದಲೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ನಾದಸ್ವರ ವಿದ್ವಾಂಸರಾದ ಶ್ರೀ ಪೈಡಿಸ್ವಾಮಿ ಅವರ ಬಳಿ ಸಂಗೀತಾಭ್ಯಾಸ ಮಾಡಿದರು. ಸಂಗೀತದ ಮೇಲಿನ ಪ್ರೀತಿ ಮತ್ತು ನಿರಂತರ ಅಭ್ಯಾಸವೇ ಅವರನ್ನು ದೇಶದ ಶ್ರೇಷ್ಠ ಹಿನ್ನೆಲೆ ಗಾಯಕಿಯರಲ್ಲಿ ಒಬ್ಬರನ್ನಾಗಿ ರೂಪಿಸಿತು.
ಭಾರತೀಯ ಸಂಗೀತ ಲೋಕದ ಗಾನಕೋಗಿಲೆ ಎಸ್ ಜಾನಕಿ ಅವರ ನಿಧನದ ಸುದ್ದಿ ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಪರೂಪದ ಕಂಠಸಿರಿಯಿಂದ ಕೋಟ್ಯಂತರ ಸಂಗೀತಪ್ರಿಯರ ಮನ ಗೆದ್ದಿದ್ದ ಎಸ್ ಜಾನಕಿ ಅವರ ಅಗಲಿಕೆಗೆ ಚಿತ್ರರಂಗ, ರಾಜಕೀಯ, ಸಂಗೀತ ಕ್ಷೇತ್ರದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ಸಂತಾಪ ಸೂಚಿಸಿದ್ದಾರೆ. ದಕ್ಷಿಣ ಭಾರತದ ಕೋಟ್ಯಂತರ ಸಂಗೀತ ಪ್ರೇಮಿಗಳನ್ನು ತಮ್ಮ ಮಾಧುರ್ಯಭರಿತ ಕಂಠದಿಂದ ರಂಜಿಸಿದ್ದ ಗಾನಕೋಗಿಲೆ ಎಸ್. ಜಾನಕಿ ಶನಿವಾರ ವಯೋಸಹಜ ಕಾಯಿಲೆಯಿಂದ ಸಾವು ಕಂಡಿದ್ದಾರೆ. ಆರು ದಶಕಗಳ ಕಾಲ ಸಂಗೀತ ಸಾಮ್ರಾಜ್ಯದ ಮಹಾರಾಜ್ಞಿಯಾಗಿ ಮೆರೆದ ಜಾನಕಿ ಅಮ್ಮನವರ ಕೊನೆಯ ದಿನಗಳ ಬದುಕು ಮಾತ್ರ ಅತ್ಯಂತ ನೋವಿನಿಂದ ಕೂಡಿತ್ತು. ತಮ್ಮ 88ರ ಇಳಿವಯಸ್ಸಿನಲ್ಲಿ ಇದ್ದೊಬ್ಬ ಏಕೈಕ ಮಗ ಮುರಳಿ ಕೃಷ್ಣ (65) ಅವರನ್ನು ಕಳೆದುಕೊಂಡ ದುಃಖದಲ್ಲೇ ಜಾನಕಿ ಅಮ್ಮ ಕೊನೆಯ ದಿನಗಳನ್ನು ಕಳೆದಿದ್ದರು. ಮಗನ ಹಠಾತ್ ಸಾವು ತಾಯಿಯಾಗಿ ಅವರನ್ನು ಸಂಪೂರ್ಣವಾಗಿ ಕುಗ್ಗಿಸಿಬಿಟ್ಟಿತ್ತು.
ಮೂಲತಃ ಆಂಧ್ರಪ್ರದೇಶದ ಗುಂಟೂರಿನವರಾದ ಎಸ್. ಜಾನಕಿ ಅವರು 50ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿ ಚೆನ್ನೈನಲ್ಲಿ ನೆಲೆಸಿದ್ದರು. ತಮ್ಮ ಅಸಾಧಾರಣ ಯಶಸ್ಸಿನ ಅವಧಿಯಲ್ಲೇ ರಾಮ್ ಪ್ರಸಾದ್ ಅವರನ್ನು ವಿವಾಹವಾಗಿದ್ದ ಜಾನಕಿ ಅವರಿಗೆ ಜನಿಸಿದ ಏಕೈಕ ಪುತ್ರನೇ ಮುರಳಿ ಕೃಷ್ಣ. ತಾಯಿಯಂತೆಯೇ ಕಲಾ ಜಗತ್ತಿನಲ್ಲಿ ಆಸಕ್ತಿ ಹೊಂದಿದ್ದ ಮುರಳಿ ಕೃಷ್ಣ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ ಪ್ರಸಿದ್ಧ ಭರತನಾಟ್ಯ ಕಲಾವಿದರು ಆಗಿದ್ದರು. ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ತಾಯಿಗೆ ಮುರಳಿ ಕೃಷ್ಣ ಅವರೇ ಏಕೈಕ ಆಸರೆಯಾಗಿದ್ದರು.
ಭರತನಾಟ್ಯ ಅಭ್ಯಾಸ ಮಾಡುವಾಗ ತಮ್ಮ ಗುರುವಾಗಿದ್ದ ಉಮಾ ಎಂಬುವವರನ್ನು ಮುರಳಿ ಕೃಷ್ಣ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ ಬಳಿಕ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಉಮಾ ಅವರಿಂದ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ನಂತರ ಹೆಣ್ಣುಮಕ್ಕಳು ತಾಯಿಯೊಂದಿಗೆ ಹೋದಾಗ, ಒಂಟಿಯಾಗಿದ್ದ ಮುರಳಿ ಕೃಷ್ಣ ತಮ್ಮ ತಾಯಿ ಎಸ್. ಜಾನಕಿ ಅವರೊಂದಿಗೆ ಉಳಿದ ದಿನಗಳನ್ನು ಕಳೆಯಲು ನಿರ್ಧರಿಸಿದ್ದರು. ತಾಯಿಯ ಯೋಗಕ್ಷೇಮವನ್ನು ಅವರೇ ಹತ್ತಿರದಿಂದ ನೋಡಿಕೊಳ್ಳುತ್ತಿದ್ದರು.
ಭಾರತೀಯ ಸಂಗೀತ ಲೋಕದ ದಂತಕಥೆ ಎಸ್ ಜಾನಕಿ ಅವರ ನಿಧನಕ್ಕೆ ಚಿತ್ರರಂಗ, ಸಂಗೀತ ಕ್ಷೇತ್ರ ಹಾಗೂ ರಾಜಕೀಯ ಗಣ್ಯರು ಭಾವಪೂರ್ಣ ಸಂತಾಪ ಸೂಚಿಸಿದ್ದಾರೆ. ಚಿರಂಜೀವಿ, ಪ್ರಭುದೇವ, ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಖ್ಯಾತ ತಾರೆಯರು ಜಾನಕಿ ಅಮ್ಮ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ‘’ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ, ಕನ್ನಡ ಚಿತ್ರರಂಗದ ಮೇರುಗಾಯಕಿ, ಗಾನಕೋಗಿಲೆ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ತಮ್ಮ ಕಂಠಸಿರಿಯ ಮೂಲಕ ಕೋಟ್ಯಂತರ ಜನರ ಮನೆಮನಗಳಲ್ಲಿ ನೆಲೆಸಿದ್ದ ಬಹುಭಾಷಾ ಗಾಯಕಿ ಜಾನಕಮ್ಮನವರ ನಿಧನದಿಂದ ಸಂಗೀತ ಕ್ಷೇತ್ರದ ಮಹಾನ್ ಸ್ವರಮಾಧುರ್ಯ ಮೌನವಾದಂತಾಗಿದೆ. ಅನೇಕ ಗಾಯಕರನ್ನು ಪ್ರೋತ್ಸಾಹಿಸಿ ಬೆಳೆಸಿದ, ಸರಳತೆಯ ಸಾಕಾರಮೂರ್ತಿ ಜಾನಕಮ್ಮನವರ ಅಪ್ರತಿಮ ಕಂಠಸಿರಿ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಂದೆಂದಿಗೂ ಅಮರ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬವರ್ಗ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ’’