Courtesy :
ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಬೆಂಗಳೂರಿನ ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ 10 ರಿಂದ 12 ಹಿರಿಯ ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.ದೆಹಲಿಯಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದ ಸಭೆಗಳಲ್ಲಿ ಜಾತೀವಾರು ಪ್ರಾತಿನಿಧ್ಯದ ಆಧಾರದ ಮೇಲೆ ಮೊದಲ ಹಂತದ ಸಂಭಾವ್ಯ ಸಚಿವರ ಪಟ್ಟಿಯನ್ನು ತಾಳೆ ಹಾಕಿ ಅಂತಿಮಗೊಳಿಸಲಾಗಿದೆ. ದಲಿತ ಮತ್ತು ಲಿಂಗಾಯತ ಸಮುದಾಯಗಳಿಗೆ ಡಿಸಿಎಂ ಹುದ್ದೆ ನೀಡುವ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸುವ ಕುರಿತು ಚರ್ಚೆಗಳು ನಡೆದಿವೆ.ಈ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಬಹುಕಾಲದ ಕನಸು ಈಡೇರುವ ಕ್ಷಣ ಹತ್ತಿರವಾದಂತಾಗಿದೆ. 2023ರ ಚುನಾವಣೆಯಲ್ಲಿ ಪ್ರದೇಶ ಕಾಂಗ್ರೆಸ್ ಸಾರಥಿಯಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಯೋಗದಾನ ನೀಡಿದ್ದ ಡಿಕೆಶಿ ಅಪೇಕ್ಷಿಸಿದ್ದ ಉನ್ನತ ಹುದ್ದೆ ದೊರಕಲಿದೆ. ಅದರೊಂದಿಗೆ ಡಿಕೆಶಿ ರಾಜ್ಯಭಾರ ಆರಂಭಗೊಳ್ಳಲಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಸತೀಶ್ ಜಾರಕಿಹೊಳಿ ಅವರಿಗೆ ಹೈಕಮಾಂಡ್ ಒತ್ತಡ ಹೇರಿದೆ. ಸಚಿವ ಸ್ಥಾನ ಬಿಟ್ಟು ಕೆಪಿಸಿಸಿ ಹೊಣೆ ಹೊರಲು ಜಾರಕಿಹೊಳಿ ತಯಾರಿಲ್ಲ. ಎರಡೂ ಸ್ಥಾನ ನೀಡಲು ಹೈಕಮಾಂಡ್ ಸಿದ್ಧವಿಲ್ಲ. ಕೆಪಿಸಿಸಿಗೆ ಪೂರ್ಣಾವಧಿ ಅಧ್ಯಕ್ಷರು ಅಗತ್ಯ ಎನ್ನುವುದು ಹೈಕಮಾಂಡ್‌ನ ಯೋಚನೆ. ಇದಕ್ಕೆ ಜಾರಕಿಹೊಳಿ ಅವರನ್ನು ಒಪ್ಪಿಸುವ ಸಾಧ್ಯತೆಯಿದೆ. ಡಾ.ಜಿ. ಪರಮೇಶ್ವರ ಅವರನ್ನೇ ಕೆಪಿಸಿಸಿಗೆ ಮತ್ತೊಮ್ಮೆ ತಂದರೆ ಹೇಗೆ ಎಂಬ ಚರ್ಚೆಯೂ ಇದೆ. ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಎನ್ನಲಾಗಿದೆ.
ಸಮಯ: ಸಂಜೆ 4.05 ಗಂಟೆಗೆ.
ಸ್ಥಳ: ಲೋಕಭವನದ ಗಾಜಿನಮನೆ, ಬೆಂಗಳೂರು.
ಪ್ರಮುಖ ಉಪಸ್ಥಿತಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಉಸ್ತುವಾರಿ ಸಿಎಂ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ.
ವಿಶೇಷ ಆಹ್ವಾನಿತರು: ಕಾಂಗ್ರೆಸ್ ಆಡಳಿತವಿರುವ ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶದ ಸಿಎಂಗಳು ಹಾಗೂ ಸರ್ವಧರ್ಮಗಳ ಧಾರ್ಮಿಕ ಮುಖಂಡರು
03-06-2026